ದಳವಾಯಿ -
ಹಳೆಯ ಮೈಸೂರು ಅರಸರು ಪ್ರಧಾನ ಸೈನ್ಯಾಧಿಕಾರಿ. ಮೈಸೂರು ನಗರದ ಆಗ್ನೇಯಕ್ಕೆ ಕೆಲವು ದೂರದಲ್ಲಿದ್ದ ಹದಿನಾಡನ್ನು (ಈಗಿನ ಹದಿನಾರು) ಆಳುತ್ತಿದ್ದ ಚಾಮರಾಜನಿಗೆ ಗಂಡು ಸಂತಾನವಿರಲಿಲ್ಲವೆಂದೂ ಅವನ ಅನಂತರ ಕಾರುಗಹಳ್ಳಿಯ ಮಾರನಾಯಕನೆಂಬ ಅವನ ದಳವಾಯಿ ಬಲಿಷ್ಠನಾಗಿ ಚಾಮರಾಜನ ಮಗಳನ್ನು ವಿವಾಹವಾಗಬಯಸಿದನೆಂದೂ ದ್ವಾರಕೆಯಿಂದ ಬಂದ ವಿಜಯ ಮತ್ತು ಕೃಷ್ಣ ಎಂಬ ಇಬ್ಬರು ವೀರರು ದಳವಾಯಿ ಮಾರನಾಯಕನನ್ನು ಕೊಂದರೆಂದೂ ಒಂದು ಕಥೆಯಿದೆ. ವಿಜಯನೇ (ಯದುರಾಯ) ಮೈಸೂರಿನ ಒಡೆಯ ವಂಶದ ಮೂಲಪುರುಷನೆಂದೂ ಹೇಳಲಾಗಿದೆ. 1578-1617ರಲ್ಲಿ ಮೈಸೂರನ್ನಾಳಿದ ರಾಜ ಒಡೆಯನ ಕಾಲದವರೆಗೂ ದಳವಾಯಿಗಳ ನೇಮಕವಾಗುತ್ತಿರಲಿಲ್ಲ. ರಾಜಒಡೆಯನ ಆಳ್ವಿಕೆಯ ಕಾಲದಲ್ಲಿ ದಳವಾಯಿಗಳ ನೇಮಕ ಆರಂಭವಾಯಿತು. ಅವರ ಸೋದರಳಿಯ ಕರಿಕಾಲ ಮಲ್ಲರಾಚಯ್ಯ ಮತ್ತು ಬೆಟ್ಟದ ಚಾಮರಾಜ ಒಡೆಯನ ಮಗ ಬೆಟ್ಟದ ಅರಸು ದಳವಾಯಿಯಾಗಿದ್ದರು. ಆರನೆಯ ಚಾಮರಾಜ ಒಡೆಯನ ಆಳ್ವಿಕೆಯ ಕಾಲದಲ್ಲಿ (1617-1637) ದಳವಾಯಿಗಳಾಗಿದ್ದವರು ಬನ್ನೂರು ಲಿಂಗಣ್ಣ ಮತ್ತು ವಿಕ್ರಮರಾಯ. ಇಮ್ಮಡಿ ರಾಜ ಒಡೆಯನ ಆಳ್ವಿಕೆಯ ಕಾಲದಲ್ಲೂ (1637-1638) ವಿಕ್ರಮರಾಯನೇ ದಳವಾಯಿಯಾಗಿದ್ದ. ರಣಧೀರ ಕಂಠೀರವ ನರಸರಾಜ ಒಡೆಯ ಆಳುತ್ತಿದ್ದಾಗ (1638-1659) ದಳವಾಯಿಗಳಾಗಿದ್ದವರು ತಿಮ್ಮಪ್ಪನಾಯಕ, ನಂಜರಾಜಯ್ಯ, ಲಿಂಗರಾಜಯ್ಯ, ಕೆಂಪಯ್ಯ, ಲಿಂಗೇಗೌಡ, ಮತ್ತು ಕಾರಗಹಳ್ಳಿ ಹಂಪರಾಜಯ್ಯ, ದೊಡ್ಡ ದೇವರಾಜ ಒಡೆಯನ ಆಳ್ವಿಕೆಯ ಕಾಲದಲ್ಲಿ (1659-1672) ಕಳಲೆ ಮಲ್ಲರಾಜಯ್ಯ, ಮುದ್ದಯ್ಯ, ನಂಜನಾಥಯ್ಯ, ಕಾಂತಯ್ಯ ಮತ್ತು ಕಳಲೆ ಕುಮಾರಯ್ಯ ಇವರೂ ಚಿಕ್ಕದೇವರಾಜ ಒಡೆಯನ ಆಳ್ವಿಕೆಯ ಕಾಲದಲ್ಲಿ (1672-1704) ದೇವಯ್ಯ, ಕಳಲೆ ಕುಮಾರಯ್ಯನ ಮಗ ದೊಡ್ಡಯ್ಯ, ಕೊಳ್ಳೇಗಾಲದ ತಿಮ್ಮಪ್ಪಯ್ಯ, ಕಳಲೆ ಕಾಂತಯ್ಯನ ಮಗ ಮಲ್ಲರಾಜಯ್ಯ, ನೀಲಸೋಗೆ ವೀರರಾಜಯ್ಯ ಮತ್ತು ದೇವರಾಯ ದುರ್ಗದ ದಾಸರಾಜಯ್ಯ ಇವರೂ ಮೂಕರಸು ಕಂಠೀರವ ಒಡೆಯರ ಆಳ್ವಿಕೆಯ ಕಾಲದಲ್ಲಿ (1704-1713) ಕಲ್ಲಹಳ್ಳಿ ಕಾಂತಯ್ಯ, ಅವನ ಮಗ ನಂಜರಾಜಯ್ಯ, ಅವನ ಮಗ ಬಸವರಾಜಯ್ಯ, ನಂಜರಾಜಯ್ಯ, ಮತ್ತು ಕಳಲೆ ದೊಡ್ಡಯ್ಯನ ಮಗ ವೀರರಾಜಯ್ಯ ಇವರೂ ದಳವಾಯಿಗಳಾಗಿದ್ದರು. ದೊಡ್ಡ ಕೃಷ್ಣರಾಜ ಒಡೆಯ ಆಳುತ್ತಿದ್ದಾಗ (1713-1731) ಕಳಲೆ ವೀರರಾಜಯ್ಯನ ಮಗ ದೇವರಾಜಯ್ಯ ತನ್ನ ತಂದೆಯ ಅನಂತರ ದಳವಾಯಿಯಾಗಿದ್ದ. ಚಾಮರಾಜನ ಒಡೆಯನ ಆಳ್ವಿಕೆಯಲ್ಲಿ (1731-1734) ದಳವಾಯಿಯಾಗಿದ್ದವ ದೇವಯ್ಯನೆಂಬ ಬ್ರಾಹ್ಮಣ. ಹೈದರಿ ಅಲಿ ಖಾನ್ ದಳವಾಯಿಯಾಗಿ ನೇಮಕವಾದ್ದು ಇಮ್ಮಡಿ ಕೃಷ್ಣರಾಜ ಒಡೆಯನ ಆಳ್ವಿಕೆಯ (1734-1766) ಕಾಲದಲ್ಲಿ. ಅನಂತರ ಅವನು ಸರ್ವಾಧಿಕಾರಿಯಾದ. ಟೀಪು ಸುಲ್ತಾನ ಅನಂತರ ಮೈಸೂರಿನ ಆಡಳಿತ ಅರಸರ ಕೈಗೆ ಮತ್ತೆ ಬಂದರೂ ಅದರ ಸೈನ್ಯಾಧಿಕಾರ ಬ್ರಿಟಿಷರ ಕೈಯಲ್ಲೇ ಇತ್ತು. ದಳವಾಯಿತನ ಕೇವಲ ಗೌರವದ ಸಂಕೇತವಾಗಿ ಮೈಸೂರಿನ ದೊರೆಗಳ ಸಮೀಪ ಬಂಧುಗಳಿಗೆ ಮೀಸಲಾಯಿತು.
(ಸಿ.ಕೆ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ